ಜಿದ್ದಾಜಿದ್ದಿನ ಕಣವಾದ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಹಕಾರ ಬಳಗದ ರಮೇಶ್ ಭಟ್ ಉಪ್ಪಂಗಳ, ಉಪಾಧ್ಯಕ್ಷರಾಗಿ ದಯಾನಂದ ರೈ ಮನವಳಿಕೆ ಆಯ್ಕೆ

When

May 23, 2025    
9:00 am - 1:00 pm

Where

Alankar
Alankar Primary agricultural credit cooperative society, Kadaba, KARNATAKA, 574285

ಆಲಂಕಾರು: ಭಾರಿ ಜಿದ್ದಾಜಿದ್ದಿನಿಂದ ಕೂಡಿದ್ದ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಇಂದು (ಮೇ 23) ರಂದು ಚುನಾವಣೆ ನಡೆಯಿತು.

ಸಂಘದ ಮುಂದಿನ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗಾಗಿ ದಿನಾಂಕ ಮಾರ್ಚ್ 2, 2024 ರಂದು ಸಂಘದ ಪ್ರಧಾನ ಕಚೇರಿಯಲ್ಲಿ ಚುನಾವಣೆ ಜರುಗಿದ್ದಿತು. ಈ ಚುನಾವಣೆಯಲ್ಲಿ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳು ಸೇರ್ಪಡೆಯಾಗಿಲ್ಲದ ಕಾರಣ, ಸಂಘದ 423 ಸದಸ್ಯರು ಮತದಾನದ ಹಕ್ಕು ಕೋರಿ ಮಾನ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ಮಾನ್ಯ ನ್ಯಾಯಾಲಯವು ಸದರಿ ಸದಸ್ಯರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಿ, ಮತ ಎಣಿಕೆಯ ನಂತರ ಫಲಿತಾಂಶ ಘೋಷಣೆಗೆ ತಡೆಯಾಜ್ಞೆ ವಿಧಿಸಿತ್ತು.

ತದನಂತರ, ಪ್ರಕರಣದ ವಿಚಾರಣೆ ದಿನಾಂಕ ಏಪ್ರಿಲ್ 24, 2024 ರಂದು ನಡೆದಾಗ, ಅರ್ಜಿದಾರರ ಪರ ವಕೀಲರು ರಿಟ್ ಅರ್ಜಿಯನ್ನು ಹಿಂಪಡೆದುಕೊಂಡಿದ್ದರು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ, ಮಾನ್ಯ ಉಚ್ಚ ನ್ಯಾಯಾಲಯವು, ನ್ಯಾಯಾಲಯದ ಅನುಮತಿಯ ಮೇರೆಗೆ ಮತ ಚಲಾಯಿಸಿದ್ದ ಸದಸ್ಯರ ಮತಗಳನ್ನು ಪರಿಗಣಿಸದೆ, ಅಧಿಕೃತ ಮತದಾರರ ಪಟ್ಟಿಯಲ್ಲಿದ್ದ ಅರ್ಹ ಮತದಾರರು ಚಲಾಯಿಸಿದ್ದ ಮತಗಳನ್ನು ಮಾತ್ರ ಪರಿಗಣಿಸಿ ಫಲಿತಾಂಶವನ್ನು ಘೋಷಿಸುವಂತೆ ಚುನಾವಣಾಧಿಕಾರಿಯವರಿಗೆ ನಿರ್ದೇಶನ ನೀಡಿತ್ತು.

ಈ ನಿರ್ದೇಶನದ ಅನ್ವಯ, ರಮೇಶ್ ಭಟ್ ಉಪ್ಪಂಗಳ ಅವರ ಸಹಕಾರ ಬಳಗದ 10 ಅಭ್ಯರ್ಥಿಗಳು ಹಾಗೂ ಸಹಕಾರ ಭಾರತಿಯ ಇಬ್ಬರು ಅಭ್ಯರ್ಥಿಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಇದೀಗ, ಚುನಾಯಿತ ನಿರ್ದೇಶಕರಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯು ಮೇ 23 ರಂದು ನಡೆಯಿತು.

ಅಧ್ಯಕ್ಷರಾಗಿ ರಮೇಶ್ ಭಟ್ ಉಪ್ಪಂಗಳ ಮತ್ತು ಉಪಾಧ್ಯಕ್ಷರಾಗಿ ದಯಾನಂದ ರೈ ಮನವಳಿಕೆ ಆಯ್ಕೆಯಾಗಿದ್ದಾರೆ. ರಮೇಶ್ ಭಟ್ ಉಪ್ಪಂಗಳ ಅವರು ಈ ಹಿಂದೆ 6 ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೀಗ 7ನೇ ಅವಧಿಗೆ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ.

ದಯಾನಂದ ರೈ ಮನವಳಿಕೆ ಅವರು ಆಲಂಕಾರು ಸೇವಾ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ನಿವೃತ್ತರಾಗಿದ್ದರು.

ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯ ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ನೂರಾರು ಜನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿದರು.